Saturday, 24 January 2015

ನಂಬರ್ ಪ್ಲೇಟ್ ಸಂಖ್ಯೆ ನೆನಪಿಡಬಲ್ಲ ಅದ್ಭುತ ಸ್ಮರಣ ಶಕ್ತಿಯ ಹಝ್ರತ್

ಪ್ರತೀ ಮನುಷ್ಯನೂ ಒಂದಲ್ಲ ಒಂದು ಹವ್ಯಾಸಗಳನ್ನು ಹೊಂದಿರುತ್ತಾನೆ. ಒಬ್ಬನ ಹವ್ಯಾಸ ಇನ್ನೊಬ್ಬನಿಗೆ ಭಿನ್ನ. ಕೆಲವರಿಗೆ ಓದುವುದೇ ಒಂದು ಹವ್ಯಾಸವಾದರೆ ಇನ್ನು ಕೆಲವರಿಗೆ ಬರೆಯುವುದು, ಟಿ.ವಿ ನೋಡುವುದು, ಪ್ರವಾಸ ಹೋಗುವುದು.....ಹೀಗೆ ನಾನಾ ರೀತಿಯಲ್ಲಿ ಅವರ ಮನಸ್ಸಿನ ಇಚ್ಛೆಯಂತಿರುತ್ತದೆ. ಇದರಲ್ಲಿ ಕೆಲ ಹವ್ಯಾಸಗಳು ಜೀವನದ ಯಶಸ್ಸಿಗೂ ಸ್ಫೂರ್ತಿಯಾಗಿದ್ದರೆ, ಇನ್ನು ಕೆಲವು ತಮ್ಮ ಕೆಲಸವನ್ನೆ ಹಾಳುಗೆಡಹುವ ರೀತಿಯಲ್ಲಿರುತ್ತದೆ.

ಹವ್ಯಾಸದ ಬಗ್ಗೆ ವಿವರಣೆ ನೀಡಲು ಇಲ್ಲಿ ಕಾರಣವಿದೆ. ತೊಕ್ಕೊಟ್ಟುವಿನಲ್ಲಿ ಹಣ್ಣಿನ ವ್ಯಾಪಾರ ನಡೆಸುವ ಹಝ್ರತ್ ನ ಹವ್ಯಾಸವೇ ವಿಭಿನ್ನವಾದುದು. ಬ್ಯುಸಿ ಜೀವನದಲ್ಲಿ ತಮ್ಮ ಸ್ವಂತ ವಾಹನಗಳ ನಂಬರ್ ನೆನಪಿನಲ್ಲಿಟ್ಟುಕೊಳ್ಳುವುದೇ ಕಷ್ಟವಾಗಿರುವ ಈ ಕಾಲದಲ್ಲಿ, ಒಂದು ಬಾರಿ ಒಂದು ವಾಹನ ನೋಡಿದರೆ ಸಾಕು. ಅದರ ನೋಂದಣಿ ಸಂಖ್ಯೆ ಈತನ ಮನಸ್ಸಿನಲ್ಲಿ ಅಚ್ಚಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ವಾಹನದ ಬಣ್ಣ, ಬಸ್ಸಿನ ಹೆಸರು ಅಥವಾ ಪರಿಚಯಸ್ಥ ವಾಹನ ಚಾಲಕನ ಹೆಸರು ಹೇಳಿದರೆ ಸಾಕು, ಅದರ ನಂಬರನ್ನು ಇಂಚಿಂಚೂ ತಪ್ಪದೇ ಹೇಳುವುದು ಈತನ ಹವ್ಯಾಸ. 

ಇದು ಬಬ್ಬುಕಟ್ಟೆ ನಿವಾಸಿ ಹುಸೈನ್ - ಫಾತಿಮಾ ದಂಪತಿ ಪುತ್ರ ಮಹಮ್ಮದ್ ಹಝ್ರತ್ ನ ವಿಶಿಷ್ಟ ಜ್ಞಾಪಕ ಶಕ್ತಿ. ತಾನು ನೋಡಿದ ಯಾವುದೇ ವಾಹನಗಳ ನಂಬರನ್ನು ಮನದಲ್ಲಿಟ್ಟು ಕ್ಷಣ ಮಾತ್ರದಲ್ಲೇ ಹೇಳಬಲ್ಲ ಈತನ ಹವ್ಯಾಸಕ್ಕೆ ಗೆಳೆಯರು ನಂಬರ್ ಪ್ಲೇಟ್ ಹಝ್ರತ್ ಎಂದೇ ನಾಮಾಂಕಿತ ಮಾಡಿದ್ದಾರೆ. 

ತಂದೆಗೆ ವ್ಯಾಪಾರದಲ್ಲಿ ಸಾಥ್ : ತಂದೆ ವೃತ್ತಿಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿದ್ದು, ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಸ್ವಂತ ಅಂಗಡಿಯನ್ನು ಹೊಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ತಂದೆಯ ಜತೆಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಈತ ಅಲ್ಲಿಗೆ ಬರುವ ಬಹುತೇಕ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡಿದ್ದು, ಸದ್ಯ ೩೦೦೦ಕ್ಕೂ ಅಧಿಕ ವಾಹನಗಳ ಸಂಖ್ಯೆ ತನ್ನ ಮನದಲ್ಲಿದೆ ಎನ್ನುತ್ತಾನೆ. ತಂದೆಯ ವೃತ್ತಿಯನ್ನೇ ಮುಂದುವರಿಸುವೆ, ತನ್ನ ಹವ್ಯಾಸ ಗುರುತಿಸಿ ಬೇರೇನಾದರೂ ಕೆಲಸ ದೊರೆತರೆ ಹೋಗುತ್ತೇನೆ ಎನ್ನುವ ಅಭಿಪ್ರಾಯ ಹಝ್ರತ್ ನದ್ದಾಗಿದೆ. 

ವಾಹನಗಳ ಬಗ್ಗೆ ಒಲವು : ಹಝ್ರತ್ ಸಣ್ಣ ವಯಸ್ಸಿನಿಂದಲೂ ವಾಹನಗಳೆಂದರೆ ತುಂಬಾ ಅಚ್ಚುಮೆಚ್ಚು. ಕೇವಲ ತಾನು ನೋಡಿದ ವಾಹನ ಮಾತ್ರವಲ್ಲದೇ ಅದರ ನಂಬರ್ ಗಳನ್ನು ಮನಸ್ಸಿನಲ್ಲಿಟ್ಟು ಕ್ರಮೇಣ ತಾನು ನೋಡಿದ ಯಾವುದೇ ವಾಹನವಾದರೂ ಕೂಡ ದೂರದಿಂದಲೇ ಬರುತ್ತಿದ್ದರೆ ಸಾಕು ಕ್ಷಣ ಮಾತ್ರದಲ್ಲೇ ಅದು ಯಾವ ವಾಹನ ಮತ್ತು ಅದರ ನಂಬರ್ ಯಾವುದು ಎಂದು ಅಲ್ಲೇ ಹೇಳುವುದನ್ನು ಮಾಡುತ್ತಿದ್ದ. ಬಸ್ಸಿನ ಹೆಸರು ಹೇಳಿದರೆ ನಂಬರ್ ಹೇಳುವುದು ತುಸು ಸುಲಭ ಅನಿಸಿಕೊಂಡರೂ, ಕಾರು, ಜೀಪು, ದ್ವಿಚಕ್ರ ವಾಹನಗಳ ಬಣ್ಣ ಅಥವಾ ಅದರಲ್ಲಿರುವ ಚಾಲಕನನ್ನು ಗಮನಿಸಿದರೆ ಸಾಕು ಕ್ಷಣ ಮಾತ್ರದಲ್ಲಿ ಅದರ ನೋಂದಣಿ ಸಂಖ್ಯೆಯನ್ನು ಚಾಚೂ ತಪ್ಪದೆ ಹೇಳುವುದು ನಿಜಕ್ಕೂ ಆಶ್ಚರ್ಯ ಪಡುವಂತಹದ್ದೇ. 

ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ದೂರದಲ್ಲಿ ಬಸ್ಸುಗಳು ಬರುತ್ತಿದೆ ಎಂದರೆ ಸಾಕು ತನ್ನ ಗೆಳೆಯರು ಬರುತ್ತಿರುವ ಬಸ್ಸಿನ ನಂಬರ್ ಹೇಳುವಂತೆ ಪಂದ್ಯ ಕಟ್ಟುತ್ತಿದ್ದರು. ಇದು ಅಭ್ಯಾಸದ ರೀತಿಯಲ್ಲಿ ಮುಂದುವರಿದು, ಇತರ ವಾಹನಗಳ ನಂಬರ್ ಗಳನ್ನು ಜ್ಙಾಪಕದಲ್ಲಿ ಇಡುವಂತೆ ಮಾಡಿದೆ ಎನ್ನುವ ಹಝ್ರತ್ ತನ್ನ ಜ್ಞಾನ ಕೆಲ ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುವುದಕ್ಕೆ ಗೆಳೆಯರೇ ಪ್ರೇರಣೆ ಅನ್ನುತ್ತಾನೆ.
ತಂದೆಯ ಕಷ್ಟ ಕಾಲದಲ್ಲಿ ಸಹಾಯವಾದ ಇತನ ಜ್ಞಾಪಕ ಶಕ್ತಿ: ಎಂತಹ ವಿದ್ಯೆಯಾದರೂ ಕೂಡ ಒಂದಲ್ಲ ಒಂದು ದಿನ ಸಹಾಯವಾಗುತ್ತದೆ ಅನ್ನೋದಕ್ಕೆ ಹಝ್ರತ್ ಸಾಕ್ಷಿ. ಅಂದು ಅಂಗಡಿಯಿಂದ ಮನೆಗೆ ಹೊರಟ ಹಝ್ರತ್ ತಂದೆಯ ಸ್ಕೂಟರಿಗೆ ಬೈಕ್ ಡಿಕ್ಕಿಯಾಗಿತ್ತು. ಇದರಿಂದ ಗಾಯಗೊಂಡ ಆತನ ತಂದೆಯನ್ನು ಬೈಕ್ ಸವಾರನೇ ಆಸ್ಪತ್ರೆಗೆ ಸೇರಿಸುವ ಮನಸ್ಸು ಮಾಡಿದನಾದರೂ, ಚಿಕಿತ್ಸೆ ವೆಚ್ಚ ಭರಿಸುವ ವಿಶ್ವಾಸ ನೀಡಿ ಬಳಿಕ ಕಣ್ತಪ್ಪಿಸಿದ್ದ. ಆದರೆ ತಂದೆಗೆ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದ ಹಝ್ರತ್ ಬೈಕ್ನ ನೋಂದಣಿ ಸಂಖ್ಯೆಯನ್ನು ಜ್ಞಾಪಕದಲ್ಲಿರಿಸಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅವರಿಂದ ಬೈಕ್ ಸವಾರನನ್ನು ಪತ್ತೆ ಹಚ್ಚಿ ಮತ್ತೆ ಚಿಕಿತ್ಸೆ ವೆಚ್ಚವನ್ನು ಪಡೆದುಕೊಂಡಿದ್ದ.

ಮಸ್ತಕದಲ್ಲಿದೆ ೨ ಸಾವಿರಕ್ಕಿಂತಲೂ ಅಧಿಕ ವಾಹನಗಳ ನಂಬರ್: ಎಲ್ಲರೂ ಲೆಕ್ಕಚಾರದಲ್ಲಿ ಎಷ್ಟೇ ಪ್ರವೀಣರಾಗಿದ್ದರೂ ಕೂಡ ನಂಬರ್ ಗಳನ್ನು ನೆನಪಿನಲ್ಲಿಟ್ಟು ಕೊಳ್ಳುವುದೆಂದರೆ ಅಷ್ಟಕಷ್ಟೆ ಬಿಡಿ. ಆದರೆ ಹಝ್ರತ್ ಹೇಳೋ ಪ್ರಕಾರ ಆತನ ತಲೆಯಲ್ಲಿ ಇದುವರೆಗೂ ಬರೋಬ್ಬರಿ ೩ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ವಾಹನಗಳ ನಂಬರ್ ನೆನೆಪಿದೆಯಂತೆ. ಇದು ನಿಜವಾಗಿಯೂ ಆತನ ನೆನಪಿನ ಶಕ್ತಿಗೆ ನಾವು ಹೊಗಳಲೇ ಬೇಕಾದ ಸಂಗತಿ.

ಹವ್ಯಾಸ ಮನುಷ್ಯನ ವ್ಯಕ್ತಿತ್ವವನ್ನು ಗುರುತಿಸುತ್ತದೆ ಹಾಗೂ ಪ್ರತಿಭೆ ಅನಾವರಣಕ್ಕೆ ಇನ್ನಷ್ಟು ಪೂರಕವಾಗುತ್ತದೆ. ಉತ್ತಮ ಹವ್ಯಾಸದ ಜೊತೆ ಜೊತೆಗೆ ಅದರಿಂದ ಸಮಾಜಕ್ಕೂ ಒಳಿತಾಗಬೇಕು. ಹಝ್ರತ್ ವಿದ್ಯೆಯ ಜೊತೆಗೆ ತನಗಿರುವ ಪ್ರತಿಭೆಗೆ ಹೆಚ್ಚಿನ ಆದ್ಯತೆ ನೀಡಿದರೆ ಮುಂದೊಂದು ದಿನ ಉದ್ಯೋಗದ ಅವಕಾಶಗಳೂ ಇವರನನ್ನು ಹುಡುಕಿಕೊಂಡು ಬಂದಾವು.

* ವಜ್ರ ಗುಜರನ್,  ಮಾಡೂರು 

No comments:

Post a Comment